ಬನ್ನಿಮರ
	ಲೆಗ್ಯುಮಿನೋಸೀ ಕುಟುಂಬದ ಮಿಮೋಸೀ ಉಪಕುಟುಂಬಕ್ಕೆ ಸೇರಿದ ವೃಕ್ಷ, ಅಕೇಸಿಯ ಫೆರೂಜಿನಿಯ ಇದರ ವೈಜ್ಞಾನಿಕ ನಾಮ, ಶಮೀ ಪರ್ಯಾಯನಾಮ, ಭಾರತ, ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ. ಭಾರತದಲ್ಲಿ ಕೊಂಕಣ, ಕರ್ನಾಟಕದ ಮೈದಾನ ಪ್ರದೇಶ, ಪಶ್ಚಿಮ ಘಟ್ಟದ ಪೂರ್ವ ಇಳಿಜಾರು ಭಾಗಗಳಲ್ಲಿ ಕಾಣದೊರೆಯುತ್ತದೆ. ಇದು ಮಧ್ಯಮಗಾತ್ರದ ಮುಳ್ಳು ಮರ. ಭಾರತ ದೇಶದಲ್ಲಿ ಪೂಜಾರ್ಹವೆನಿಸಿದೆ. ಹಿಂದೆ ಪಾಂಡವರು ಅಜ್ಞಾತವಾಸಕ್ಕಾಗಿ, ಕಾಡಿಗೆ ಹೋದಾಗ ಅರ್ಜುನ ತನ್ನ ಗಾಂಡೀವಾಸ್ತ್ರವನ್ನು ಹೆಣದ ರೂಪದಲ್ಲಿ ಬನ್ನಿಮರಕ್ಕೆ ನೇತುಹಾಕಿದನಂತೆ, ಹೀಗೆ ಇದಕ್ಕೆ ಪುರಾಣೇತಿಹಾಸ ಇರುವುದರಿಂದಲೇ ಇದು ಪೂಜಾರ್ಹತೆ ಪಡೆದಿರಬಹುದು.

	ಮರ ನೋಡಲು ಅಂದವಾಗಿದೆ. ಸುಮಾರು 3-5 ಮೀ ಎತ್ತರಕ್ಕೆ ಬೆಳೆಯುತ್ತದೆ ತೊಗಟೆ ಕಂದು ಬಣ್ಣದ್ದು. ಚಳಿಗಾಲದಲ್ಲಿ ಎಲೆಗಳು ಉದುರಿ ಹೋಗುವುವು ಎಲೆಗಳ ಬುಡದಲ್ಲಿ ಬೆಳೆಯುವ ವೃಂತಪರ್ಣಗಳು ಮುಳ್ಳುಗಳ ರೂಪದಲ್ಲಿವೆ ಏಪ್ರಿಲಿನಲ್ಲಿ ಹೂ ಬಿಟ್ಟು ಜುಲೈ ತಿಂಗಳಲ್ಲಿ ಬೀಜ ಕಟ್ಟುತ್ತದೆ. ಮರದ ಹೊರಪದರ ಹಳದಿ ಮಿಶ್ರಿತ ಬಿಳಿ, ಒಳಭಾಗ ಆಲಿವ್ ಕಂದು ಬಣ್ಣದವು. ವಯಸ್ಸಾದಂತೆ ಒಳಭಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಹೊರಭಾಗ ಬೇಗನೆ ಕೆಟ್ಟು ಹೋರ ಚೇಗುಭಾಗ ಗಾಳಿ ಬೆಳಕಿಗೆ ಮೈಯೊಡ್ಡುವಂತಿದ್ದರೂ ಬಹುಕಾಲ ಬಾಳಿಕೆಬರುತ್ತದೆ. ಗಟ್ಟಿಮರವಾದ್ದರಿಂದ ಗಾಡಿಯ ಗಾಲಿ, ಕಂಬ, ದಿಮ್ಮಿಗಳ ಹಾಗೂ ಕೃಷಿ ಉಪಕರಣಗಳ ತಯಾರಿಕೆಗೆ ಉಪಯುಕ್ತ. ತೊಗಟೆ ಮತ್ತು ಕಾಯಿಯಿಂದ ತಯಾರಿಸಿದ ತೈಲ ಗಾಯದಿಂದ ಸೋರುವ ರಕ್ತಸ್ರಾವವನ್ನು ತಡೆಯುತ್ತದೆ. ಬನ್ನಿಯಿಂದ ಸಹ ಗಮ್ ಅರ್ಯಾಬಿಕಾ ರೀತಿಯ ಗೋಂದನ್ನು ಪಡೆಯಬಹುದು.
(ಎ.ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ